ಚೈತನ್ಯ
ಸು. 1485-ಸು. 1534. ಬಂಗಾಳದ ವೈಷ್ಣವ ಪಂಥಕ್ಕೆ ನಿಷ್ಕøಷ್ಟ ರೂಪವನ್ನು ಕೊಟ್ಟ ಮಹಾಭಕ್ತ; ಚೈತನ್ಯ ಸಂಪ್ರದಾಯದ ಪ್ರವರ್ತಕ. ಚೈತನ್ಯ ಎಂಬುದು ಕೃಷ್ಣ ಚೈತನ್ಯ ಎಂಬ ಹೆಸರಿನ ಸಂಕ್ಷಿಪ್ತರೂಪ. ತಂದೆ ತಾಯಿ ಈತನಿಗಿಟ್ಟ ಹೆಸರು ವಿಶ್ವಂಭರ ಎಂದು. ಗೌರವರ್ಣದ ಜನ ಬಾಲನನ್ನು ಗೌರಾಂಗ ಎಂದೂ ಅಲ್ಪಾಯುಷಿ ಎಂಬ ಅರ್ಥದಲ್ಲಿ ನಿಮಾಯಿ ಎಂದೂ ಕರೆದರು. ಚೈತನ್ಯ ನವದ್ವೀಪದ (ಈಗಿನ ನದಿಯಾ) ವೈದಿಕ ಬ್ರಾಹ್ಮಣ ಜಗನ್ನಾಥ ಮಿಶ್ರನ ಮಗ; ತಾಯಿ ಶಚೀದೇವಿ. ಎಳೆವಯಸ್ಸಿನಲ್ಲಿ ಈತ ಆಟದಲ್ಲೇ ಹೆಚ್ಚು ಆಸಕ್ತನಾಗಿದ್ದಂತೆ ತೋರುತ್ತದೆ. ಒಂದು ಪಾಠಶಾಲೆಯಲ್ಲಿ ಕೆಲವು ದಿನ ಅಕ್ಷರ ಕಲಿತು ಅನಂತರ ಗಂಗಾದಾಸ್ ಪಂಡಿತನಲ್ಲಿ ಈತ ವಿದ್ಯೆಗೆ ನಿಂತ. ಅಲ್ಲಿ ಎರಡು ವರ್ಷ ವ್ಯಾಕರಣ, ಎರಡು ವರ್ಷ ಸಾಹಿತ್ಯ ಅಭ್ಯಸಿಸಿದ. ಅನಂತರ ವಿಷ್ಣುಮಿಶ್ರನಲ್ಲಿ ಸ್ಮøತಿ ಮತ್ತು ಜ್ಯೋತಿಷ್ಯವನ್ನೂ ಸುದರ್ಶನಮಿಶ್ರನಲ್ಲಿ ಷಡ್ದರ್ಶನವನ್ನೂ ಕಲಿತ. ಪಂಡಿತರ ವಂಶಕ್ಕೆ ಸೇರಿದ ಈತ ತುಂಬ ಚುರುಕಾಗಿದ್ದ. ಹದಿನೈದರ ವಯಸ್ಸಿನಲ್ಲಿಯೇ ಈತನಿಗೆ ಪಂಡಿತ ಎಂಬ ಗೌರವ ದೊರಕಿತು. ಈ ವೇಳೆಗೆ ಇವನ ತಂದೆ ತೀರಿಕೊಂಡು, ಇವನ ಒಬ್ಬನೇ ಜೀವಂತ ಸೋದರ ವಿಶ್ವರೂಪ ಎಂಬಾತ ಎತ್ತಲೊ ಹೊರಟುಹೋಗಿ, ಈ ಕಿರಿಯ ತನ್ನ ತಾಯ ಹಂಬಲದ ಏಕವಸ್ತುವಾಗಿ ಉಳಿದ. ಹದಿನಾರನೆಯ ವಯಸಿನಲ್ಲಿಯೇ ಸ್ವಂತ ಪಾಠಶಾಲೆಯೊಂದನ್ನು ತೆರೆದು ವ್ಯಾಕರಣವನ್ನು ಹೇಳಿಕೊಡಲು ಪ್ರಾರಂಭಿಸಿದ. ವಲ್ಲಭಾಚಾರ್ಯನ ಪುತ್ರಿ ಲಕ್ಷ್ಮೀಪ್ರಿಯಾಳ ಜೊತೆ ಇವನಿಗೆ ಪ್ರಥಮ ವಿವಾಹವಾಯಿತು. ಅನಂತರ ಅಂದಿನ ತರುಣ ಪಂಡಿತರ ರೂಢಿಯಂತೆ ಚೈತನ್ಯ ದೇಶಯಾತ್ರೆಗೆ ಹೊರಟ. ಯಾತ್ರೆಯಿಂದ ಹಿಂತಿರುಗುವ ಮುನ್ನ ಹೆಂಡತಿ ಸರ್ಪದಂಶನದಿಂದ ತೀರಿಕೊಂಡಿದ್ದಳು. ಮರಳಿ ಮದುವೆಯಾದ. ಈ ಹೆಂಡತಿಯ ಹೆಸರು ವಿಷ್ಣುಪ್ರಿಯಾ. ಅವಳು ನವದ್ವೀಪದ ಸನಾತನಮಿಶ್ರ ಎಂಬ ಪಂಡಿತನ ಮಗಳು. ಈ ವಯಸ್ಸಿನಲ್ಲಿ ಚೈತನ್ಯ ಮನೆತನದ ವೈಷ್ಣವಾಚಾರಕ್ಕಿಂತ ಪಾಂಡಿತ್ಯದಲ್ಲಿ ಹೆಚ್ಚು ಶ್ರದ್ಧೆ ತೋರುತ್ತಿದ್ದ. ಮಾಧ್ವ ಸಿದ್ಧಾಂತದ ಒಬ್ಬ ಸಂನ್ಯಾಸಿಯಾದ ಈಶ್ವರಪುರಿ ಎಂಬ ವೈಷ್ಣವ ಹಿರಿಯ ಇವನನ್ನು ತನ್ನ ಪಂಥದತ್ತ ಸೆಳೆಯಲು ಪ್ರಯತ್ನಿಸಿ ಸೋತ. ಆದರೆ ಐದು ವರ್ಷದ ಅನಂತರ ತಂದೆಯ ಶ್ರಾದ್ಧ ಮಾಡಲು ಗಯೆಗೆ ಹೋದ ವೇಳೆ ಈಶ್ವರಪುರಿಯನ್ನು ಅಲ್ಲಿ ಕಂಡು ಅವನನ್ನು ಗುರುವಾಗಿ ಸ್ವೀಕರಿಸಿ ಭಕ್ತನಾದ. ಗಯೆಯಲ್ಲಿ ವಿಷ್ಣುಪಾದದ ದರ್ಶನವಾದ ಕೂಡಲೇ ಚೈತನ್ಯದಲ್ಲಿ ಒಮ್ಮಿಂದೊಮ್ಮೆ ಬದಲಾವಣೆಯಾಗಿ ಆತ ಭಕ್ತನಾದ ಎಂದೂ ಹೇಳಲಾಗುತ್ತದೆ. ಅನಂತರ ನವದ್ವೀಪಕ್ಕೆ ಹಿಂತಿರುಗಿ ಪಾಂಡಿತ್ಯದ ಎಲ್ಲ ಕಲಾಪವನ್ನೂ ತೊರೆದು ವೈಷ್ಣವ ಪಂಥದ ಭಕ್ತಿಕೂಟಗಳಲ್ಲಿ ಸೇರಿ ಭಕ್ತಿ ಗ್ರಂಥಗಳ ಪಾಠದಲ್ಲಿ ಕೀರ್ತನೆಗಳಲ್ಲಿ ಲೀನನಾದ. ಸಂಜೆಯ ಈ ಪ್ರವಚನ ಕೀರ್ತನೆಗಳು ಶ್ರೀವಾಸ ಎಂಬ ಹೆಸರಿನ ಪ್ರಮುಖ ಭಕ್ತನ ಮನೆಯ ತೊಟ್ಟಿಯಲ್ಲಿ ನಡೆಯುತ್ತಿದ್ದುವು. ಪಾಂಡಿತ್ಯದಲ್ಲಿ ಹೇಗೋ ಹಾಗೆ ಕೀರ್ತನದಲ್ಲಿಯೂ ಚೈತನ್ಯನದು ತೀವ್ರ ಸಿದ್ಧಿ. ಈ ವೇಳೆಗೆ ಚೈತನ್ಯ ಶಿಷ್ಯರನ್ನು ಅಂಗೀಕರಿಸಲು ತೊಡಗಿದ್ದ. ಶಿಷ್ಯರೊಡನೆ ಕೀರ್ತನೆ ಮಾಡುತ್ತ ನಗರವನ್ನು ಸುತ್ತುವ ಪರಿಪಾಟ ಮೊದಲಾಯಿತು. ಅಂದಿಗೆ ನವದ್ವೀಪ ವೈಷ್ಣವ ಭಕ್ತಿಗೆ ಕೇಂದ್ರವೆಂದು ಹೆಸರು ಗಳಿಸಿತ್ತು. ಚೈತನ್ಯಗಿಂತ ಎಷ್ಟೋ ವರ್ಷ ಹಿರಿಯನಾದ ಅದ್ವೈತಾಚಾರ್ಯ ಎಂಬ ಒಬ್ಬ ಪಂಡಿತನೂ ಕೆಲವು ವರ್ಷ ಹಿರಿಯನಾದ ನಿತ್ಯಾನಂದ ಎಂಬ ಒಬ್ಬ ಸಂನ್ಯಾಸಿಯೂ ಇವನ ಶಿಷ್ಯರಾದರು. ಕೀರ್ತನೆಗಳಲ್ಲದೆ ಚೈತನ್ಯ ಕೃಷ್ಣನ ಕಥೆಯ ಪ್ರಸಂಗಗಳನ್ನು ನಾಟಕ ಮಾಡಿ ಆಡಿಸಲು ತೊಡಗಿದ. ಅಂಥ ಆಟಗಳಲ್ಲಿ ತಾನೇ ರುಕ್ಮಿಣಿಯ ಪಾತ್ರವನ್ನು ವಹಿಸುತ್ತಿದ್ದ. ಇದೇ ಕಾಲದಲ್ಲಿ, ಕೃಷ್ಣನ ಲೀಲೆಯ ಸ್ಥಾನವಾದ ಬೃಂದಾವನವನ್ನು ಉಜ್ಜೀವನಗೊಳಿಸಲು ನಿಶ್ಚಯಿಸಿ ಲೋಕನಾಥ ಗೋಸ್ವಾಮಿ ಎಂಬ ತನ್ನ ಶಿಷ್ಯನನ್ನು ಆ ಕೆಲಸಕ್ಕಾಗಿ ಅಲ್ಲಿಗೆ ಕಳುಹಿಸಿದ. ನಾಲ್ಕು ವರ್ಷ ಭಕ್ತಿಸಾಧನೆಯ ಅನಂತರ ನವದ್ವೀಪದಿಂದ ಸ್ವಲ್ಪ ದೂರದ ಕಟ್ಟಾಯ್ ಎಂಬ ಗ್ರಾಮದಲ್ಲಿ ಕೇಶವ ಭಾರತಿ ಎಂಬ ಸಂನ್ಯಾಸಿಯಿಂದ ಗುಪ್ತವಾಗಿ ಸಂನ್ಯಾಸ ಸ್ವೀಕಾರ ಮಾಡಿದ. ಅಂದಿನಿಂದ ಗೌರಾಂಗ ಮಹಾಪ್ರಭುವಾದ. ಸಂನ್ಯಾಸ ಸ್ವೀಕಾರದಿಂದ ತಾಯಿ, ಹೆಂಡತಿ ತುಂಬ ನೊಂದರು. ಅನಂತರ ಬೃಂದಾವನ ಯಾತ್ರೆಗೆ ಹೊರಟ. ಮಿತ್ರರೂ ತಾಯಿಯೂ ತಡೆದರು; ಜಗನ್ನಾಥಪುರಿಯಲ್ಲಿ ನಿಲ್ಲುವುದಾಗಿ ತಾಯಿಗೆ ಮಾತುಕೊಟ್ಟು ಆ ಕ್ಷೇತ್ರಕ್ಕೆ ಹೋದ; ಅಲ್ಲಿಯ ಮೂರ್ತಿಯನ್ನು ನೋಡಿ ಭಾವಪರವಶನಾಗಿ ಸಮಾಧಿಯಲ್ಲಿ ಕೆಡೆದ. ಕ್ಷೇತ್ರದ ಪ್ರಖ್ಯಾತ ವೇದಾಂತಿ ವಾಸುದೇವ ಸಾರ್ವಭೌಮ ಇವನನ್ನು ತನ್ನ ಮನೆಗೆ ಒಯ್ದು ಶುಶ್ರೂಷೆ ಮಾಡಿದನಲ್ಲದೆ ಕೆಲವು ದಿವಸಗಳಾದ ಮೇಲೆ ಚೈತನ್ಯದ ಭಕ್ತಿಪಂಥವನ್ನು ಸೇರಿದ. ಈ ವೇಳೆಗೆ ಚೈತನ್ಯ ಶ್ರೀಕೃಷ್ಣನ ಅಪರಾವತಾರ ಎಂಬ ನಂಬಿಕೆ ಬೆಳೆದಿತ್ತು. ಕೆಲವು ತಿಂಗಳ ಅನಂತರ ಚೈತನ್ಯ ಕ್ಷೇತ್ರಯಾತ್ರೆ ಹೊರಟು ಶ್ರೀ ಕೂರ್ಮ, ರಾಜಮಹೇಂದ್ರ, ಕಾಂಚೀಪುರ, ಚಿದಂಬರ, ಶ್ರೀರಂಗ, ಮಧುರೆ, ರಾಮೇಶ್ವರ, ತಿರುವನಂತಪುರ, ಶೃಂಗೇರಿ, ಉಡುಪಿ, ಕೊಲ್ಹಾಪುರ, ಪಂಢರಪುರ ಮೊದಲಾದ ಕ್ಷೇತ್ರಗಳನ್ನು ಸಂದರ್ಶಿಸಿದ. ರಾಜಮಹೇಂದ್ರದಲ್ಲಿ ರಾಮಾನಂದರಾಯ್ ಎಂಬ ಪ್ರಸಿದ್ಧ ಭಕ್ತನ ಪರಿಚಯವಾಯಿತು. ಶ್ರೀರಂಗದಲ್ಲಿ, ಉಡುಪಿಯಲ್ಲಿ ವೈಷ್ಣವರೊಂದಿಗೆ ಚರ್ಚೆ ನಡೆಯಿತು. ಹಿಂದಿರುಗಿ ಬರುತ್ತ ಬ್ರಹ್ಮಸಂಹಿತಾ, ಕೃಷ್ಣಕರ್ಣಾಮೃತ ಎಂಬ ಎರಡು ಗ್ರಂಥಗಳನ್ನು ತಂದ. ಜಯದೇವನ ಗೀತಗೋವಿಂದ ಅಂದಿಗೆ ವಂಗದೇಶದಲ್ಲಿ ಬಳಕೆಯಲ್ಲಿದ್ದ ವೈಷ್ಣವಮತ ಗ್ರಂಥ. ಹೊಸ ಗ್ರಂಥಗಳೆರಡೂ ಇದರೊಂದಿಗೆ ಚೈತನ್ಯ ಪಂಥದ ಮುಖ್ಯ ಗ್ರಂಥಗಳಾದವು. ಪುರಿಯ ದೊರೆ ಪ್ರತಾಪರುದ್ರ ಚೈತನ್ಯದ ಶಿಷ್ಯನಾದ. ಭಕ್ತನಿಗೆ ಯುಕ್ತವಾದ ನೈಚ್ಚಯಾನುಸಂಧಾನದಲ್ಲಿ ಆಲಯದ ಯಾವ ಊಳಿಗವನ್ನೂ ಮಾಡುವ ಸಂತೋಷವನ್ನು ಚೈತನ್ಯ ಅನುಭವಿಸಿದ. ಇದು ಮೊದಲು ತಮ್ಮ ನಾಯಕನನ್ನು ದರ್ಶನ ಮಾಡಲು ನವದ್ವೀಪ ಮತ್ತು ಅದರ ಸುತ್ತಲ ವೈಷ್ಣವ ಭಕ್ತರು ತಂಡತಂಡವಾಗಿ ಜಾತ್ರೆ ನಡೆಸಿಕೊಂಡು ಬಂದರು. ಮಗನ ದರ್ಶನ ಪಡೆಯಲು ತಾಯಿಯೂ ಬರಲಾಗಿ ಚೈತನ್ಯ ಆಕೆಯನ್ನು ರಾಮಕಾಳಿ ಎಂಬ ಸ್ಥಳದಲ್ಲಿ ಎದುರುಗೊಂಡ. ಒಬ್ಬ ನವಾಬನಲ್ಲಿ ಅಧಿಕಾರಿಗಳಾಗಿದ್ದ ಸ್ಮಾರ್ತ ಸೋದರರಿಬ್ಬರನ್ನು ಅಲ್ಲಿ ಶಿಷ್ಯರಾಗಿ ಅಂಗೀಕರಿಸಿದ. ಇವರೇ ಆಮೇಲೆ ಚೈತನ್ಯ ಪಂಥದಲ್ಲಿ ಪ್ರಸಿದ್ಧರಾದ ರೂಪ ಗೋಸ್ವಾಮಿ ಮತ್ತು ಸನಾತನ ಗೋಸ್ವಾಮಿ. ಆಮೇಲೆ ಚೈತನ್ಯ ವಾರಾಣಸಿ, ಮಥುರಾ, ಗೋವರ್ಧನ, ಬೃಂದಾವನ ಕ್ಷೇತ್ರಗಳಿಗೆ ಹೋದ. ಬೃಂದಾವನದಲ್ಲಿ ಪ್ರಚಂಡ ಅನುಭಾವದಲ್ಲಿ ಸ್ವಲ್ಪ ಕಾಲ ಕಳೆದು ಪ್ರಯಾಗಕ್ಕೆ ಮರಳಿ ಅಲ್ಲಿಂದ ವಾರಾಣಸಿಗೆ, ಅಲ್ಲಿಂದ ಪುರಿಗೆ ಬಂದ. ವಾರಾಣಸಿಯಲ್ಲಿ ಪ್ರಕಾಶನಂದ ಸರಸ್ವತಿ ಎಂಬ ಪ್ರಮುಖ ವೇದಾಂತ ವಿದ್ವಾಂಸನನ್ನು ತನ್ನ ಪಂಥಕ್ಕೆ ಸೇರಿಸಿಕೊಂಡ. ಜಗನ್ನಾಥ ಪುರಿಯಲ್ಲಿ ಹದಿನೆಂಟು ವರ್ಷ ದೈವ ಸನ್ನಿಧಿಯಲ್ಲಿದ್ದು 1534ರಲ್ಲಿ ಇಹಜೀವನವನ್ನು ಮುಗಿಸಿದ. ಈತ ತೀರಿಕೊಂಡ ರೀತಿಯನ್ನು ಕುರಿತು ಹಲವು ಕಥನಗಳಿವೆ. ಕಾಲಲ್ಲಿ ಕಾಣಿಸಿಕೊಂಡ ಒಂದು ವ್ರಣದಿಂದ ತೀರಿಕೊಂಡ. ಎನ್ನುವುದು ಒಂದು. ಸಮಾಧಿಯಲ್ಲಿದ್ದ ವೇಳೆ ಸಮುದ್ರದೊಳಕ್ಕೆ ನಡೆದು ಜೀವನ ಮುಗಿಸಿದ ಎನ್ನುವುದು ಒಂದು. ಜಗನ್ನಾತನ ಮೂರ್ತಿಯಲ್ಲಿ ಲೀನವಾಗಿ ಕಣ್ಮರೆಯಾದ ಎನ್ನುವುದು ಒಂದು.

	ಅಂದಿನ ಸಾಮಾಜಿಕ ಜೀವನದ ಮೇಲೆ ಚೈತನ್ಯದ ಮೇಲೆ ಚೈತನ್ಯನ ಪ್ರಭಾವ ಅಪಾರ. ಚೈತನ್ಯ ವರ್ಣವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದ. ಈ ವಿಚಾರ ಕ್ರಾಂತಿ ಅಂದಿನ ಸಮಾಜದ ಮೇಲೆ ದೊಡ್ಡ ಪರಿಣಾಮ ಮಾಡಿತು. ಜಾತಿವಾದವನ್ನು ತೊಡೆಯಲು ಹಿಂದೂ ಮುಸಲ್ಮಾನರ ವೈಷಮ್ಯವನ್ನು ಅಳಿಸಲು ಚೈತನ್ಯ ಬಹುವಾಗಿ ಶ್ರಮಿಸಿದ.		(ಎಂ.ವಿ.ಐ.; ಕೆ.ಕೆ.)

	ಮಹಾ ವಿದ್ವಾಂಸನಾದರೂ ಚೈತನ್ಯನು ಗ್ರಂಥರಚನೆಗೆ ಕೈಹಾಕಲಿಲ್ಲ. ಈತ ರಚಿಸಿದ್ದೆಂಬ ಪ್ರತೀತಿ ಇರುವ ಕೃತಿ ಒಂದೇ ಒಂದು. ಅದರಲ್ಲಿ ಎಂಟು ಶ್ಲೋಕಗಳಿವೆ. ದೇವರ ಹೆಸರು ಅವನ ಶಕ್ತಿಯನ್ನು ವೃದ್ಧಿ ಮಾಡುತ್ತದೆ; ಅದನ್ನು ಯಾವ ಹೊತ್ತಿನಲ್ಲೂ ನೆನೆಯಬಹುದು. ಆದರೂ ನಾನು ನಿನ್ನಲ್ಲಿ ಭಕ್ತಿಯಿಡುವುದನ್ನು ಕಲಿತಿಲ್ಲ. ಕೃಷ್ಣನ ಹೆಸರನ್ನು ಹೇಳಬಯಸುವ ಮನುಷ್ಯ ವಿನಯವನ್ನೂ ಸಹನೆಯನ್ನೂ ಅನುಷ್ಠಾನ ಮಾಡಬೇಕು; ತಾನು ನೈಚ್ಯಾನುಸಂಧಾನ ಮಾಡಿ ಹೆರವರಿಗೆ ಗೌರವ ತೋರಬೇಕು. ಭಗವಂತನಲ್ಲಿ ವಿಶ್ವಾಸ ಇಡುವುದಕ್ಕಿಂತ ಹೆಚ್ಚಿನ ಸಂಪತ್ತು ಇನ್ನೊಂದು ಇಲ್ಲ. ಆದ್ದರಿಂದ ಮನುಷ್ಯನಾದವ ಭಕ್ತಿಪರವಶನಾಗಬೇಕು. ಅಷ್ಟೇ ದಿಟವಾಗಿ ದೈವದಿಂದ ಆಗಲಿರುವುದು ದೌರ್ಭಾಗ್ಯದಲ್ಲಿ ಹೆಚ್ಚಿನ ದೌರ್ಭಾಗ್ಯ. ಭಗವನ್ನಾಮಕ್ಕೆ ಜಯ, ನನ್ನನ್ನು ಎಲ್ಲಿಯೆ ನಿಲ್ಲಿಸಿದರೂ ನನ್ನ ಹೃದಯದ ನಾಥನಾಗಿರುವ ಓ ನನ್ನ ದೈವವೇ ನನ್ನನ್ನು ಅಂಗೀಕರಿಸು. ಇದು ಈ ಶ್ಲೋಕಗಳ ಸಾರ.
ಚೈತನ್ಯ ಪಂಥ : ವಂಗದೇಶದ ವೈಷ್ಣವಪಂಥ ಚೈತನ್ಯನಿಗೂ ಹಿಂದಿನಿಂದ ಬೆಳೆದು ಬಂದಿತ್ತು. ಇದು ಮೂಲತಃ ಶ್ರೀಮಧ್ವಾಚಾರ್ಯರ ಅನುಯಾಯಿಗಳ ಶಾಖೆಯಾಗಿದ್ದು ಶ್ರೀ ಭಾಗವತಪುರಾಣವನ್ನು ಆಧಾರಗ್ರಂಥವಾಗಿ ಅವಲಂಬಿಸಿತ್ತು. ಕಾಲಾನುಕ್ರಮದಲ್ಲಿ ರಾಧಾಕೃಷ್ಣರ ಪ್ರೇಮವನ್ನು ಹಾಡಿದ ಬಂಗಾಳೀ ಗೀತಕಾರ ಭಕ್ತರಿಂದ ಮುಂದುವರಿದು ಜಯದೇವನ ಗೀತಗೋವಿಂದವನ್ನು ಒಂದು ಮುಖ್ಯ ಗ್ರಂಥವಾಗಿ ಗ್ರಹಿಸಿತ್ತು. ಬ್ರಹ್ಮಸಂಹಿತೆ, ಶ್ರೀಕೃಷ್ಣಕಣಾಮೃತ ಗ್ರಂಥಗಳನ್ನು ಚೈತನ್ಯ ತನ್ನ ಗ್ರಂಥಗಳಾಗಿ ಅಂಗೀಕರಿಸಿದನಷ್ಟೇ. ಚೈತನ್ಯ ಸ್ವತಃ ಗ್ರಂಥರಚನೆ ಮಾಡದಿದ್ದರೂ ಸನಾತನ ಗೋಸ್ವಾಮಿಗೆ ಪಂಥದ ಸ್ಮøತಿಯನ್ನು ನಿರ್ಮಿಸಲು ಆದೇಶವಿತ್ತ; ಅದರ ರೂಪರೇಖೆಯನ್ನು ಸೂಚಿಸಿದ. ಸನಾತನ ಗೋಸ್ವಾಮಿ ಹರಿಭಕ್ತಿವಿಲಾಸ ಎಂಬ ಗ್ರಂಥವನ್ನು ರಚಿಸಿದ. ಇತರ ಭಕ್ತರು ಇತರ ಗ್ರಂಥಗಳನ್ನು ಬರೆದರು. ಬ್ರಹ್ಮಸೂತ್ರಗಳಿಗೆ ಈ ಪಂಥವನ್ನನುಸರಿಸಿದ ಒಂದು ಭಾಷ್ಯೆ ಅವಶ್ಯಕವೆಂದು ಕಂಡಾಗ ಬಲದೇವ ವಿದ್ಯಾಭೂಷಣ ಎಂಬ ಪಂಡಿತ ಒಂದು ಭಾಷ್ಯವನ್ನು ರಚಿಸಿದ. ಪಂಥದ ಭಕ್ತರನೇಕರು ಗೀತೆಗಳನ್ನು ರಚಿಸಿದರು. ಅವು ಜನಪ್ರಿಯವಾಗಿ ನಾಡಿನಲ್ಲೆಲ್ಲ ಹರಡಿದವು. ಚೈತನ್ಯ ಪಂಥೀಯವರಿಗೆ ಇವೆಲ್ಲ ಧಾರ್ಮಿಕ ಗ್ರಂಥಗಳಾಗಿ ಉಳಿದಿವೆ.

	ಪಂಥದ ಉಪದೇಶಕ್ಕೆ ಗುರು ಚೈತನ್ಯನ ಜೀವನವೇ ಆಧಾರ. ಉಪನಿಷತ್ತುಗಳು, ಬ್ರಹ್ಮಸೂತ್ರಗಳು, ಹಾಗೆಯೇ ಗೀತೆ ಹೇಳಿರುವಂತೆ ದೇವರು ಸರ್ವೋತ್ತಮ ಸತ್ಯ. ಆನಂದ ಅವನ ಸ್ವರೂಪ. ಈ ಅತ್ಯುನ್ನತ ಸತ್ಯದ ಹೆಸರು ಕೃಷ್ಣ. ಈ ದೈವದೊಂದಿಗೆ ಬೆಳೆಸಬೇಕಾದ ಉತ್ಕಷ್ಟ ಸಂಬಂಧ ಪ್ರೇಮ. ಕರ್ಮ, ಜ್ಞಾನ, ಯೋಗ, ಇದಕ್ಕೆ ಸಮನಲ್ಲ. ಈ ಪ್ರೇಮದ ಅತಿ ಶ್ರೇಷ್ಠ ಆದರ್ಶ ರಾಧೆ. ಚೈತನ್ಯಮಹಾಪ್ರಭು, ರಾಧಕೃಷ್ಣರಿಬ್ಬರೂ ಸೇರಿದ ಒಂದು ಅವತಾರ. ಬ್ರಹ್ಮ, ವಿಷ್ಣು, ಶಿವ-ಇವರು ಕೃಷ್ಣನ ಅವಿಷ್ಕಾರಗಳು. ಕೃಷ್ಣನಿಗೆ ಮೂರು ಶಕ್ತಿ ಇವೆ. ಚಿತ್, ಮಾಯಾ, ಜೀವ, ಚಿತ್ ಪರಮಾತ್ಮ; ಅದರ ಮುಖ್ಯ ಲಕ್ಷಣ ಹ್ಲಾದ. ಮಾಯೆಯಿಂದ ಲೋಕ, ಜೀವದಿಂದ ಜೀವಾತ್ಮಗಳು, ನಿರ್ಮಾಣವಾಗುತ್ತವೆ. ಜೀವಾತ್ಮ ಪರಮಾತ್ಮಗಳ ಸಂಬಂಧ ಅಂತ್ಯ. ಅವು ಎಷ್ಟರ ಮಟ್ಟಿಗೆ ಭಿನ್ನವೋ ಅಷ್ಟರ ಮಟ್ಟಿಗೆ ಅಭಿನ್ನ. ಇದು ಅನುಭವೈಕ ವೇದ್ಯ. ಭೂಲೋಕದ ಬೃಂದಾವನದ ಕೃಷ್ಣಲೀಲೆ ಪರಲೋಕದ ಜೀವ ಪರಮಾತ್ಮ ಲೀಲೆಯ ಒಂದು ಪ್ರತಿ. ಕೆಲವು ಜೀವಾತ್ಮಗಳು ರಾಧೆಯ ಸ್ಥಿತಿಯಲ್ಲಿರುತ್ತವೆ; ಅನೇಕ ಅವಳ ಗೆಳತಿಯರ ಸ್ಥಿತಿಯಲ್ಲಿರುತ್ತವೆ. ಜೀವಾತ್ಮ ಪರಮಾತ್ಮರ ಸಂಬಂಧವನ್ನು ಗಂಡು ಹೆಣ್ಣಿನ ಮಧ್ಯದ ಪ್ರೇಮ ಎಂದು ವರ್ಣಿಸುವುದು ವಿವರಣೆಯ ಸಲುವಾಗಿ; ಅದನ್ನು ವಿಷಯಸುಖ ಎಂದು ಭಾವಿಸಲಾಗದು. ಭಕ್ತನಾದ ಜೀವ ಆ ಭಕ್ತಿಯಿಂದ ಉದ್ಧಾರವಾಗುತ್ತದೆ; ಆದಕಾರಣ ಭಕ್ತಜೀವದ ಜಾತಿ, ಕುಲ, ಗೋತ್ರ, ಲಿಂಗ, ವಿದ್ಯೆ, ಇವು ಗೌಣ. ಲೋಕ ಭಗವಂತನಿಗೆ ಸೇವೆ ಸಲ್ಲಿಸುವ ಕ್ಷೇತ್ರ. ಭಕ್ತನಾದವ ತನ್ನ ಆವರಣದಲ್ಲಿ ಎಲ್ಲೆಡೆಯೂ ದೈವವನ್ನೂ ಕಾಣುತ್ತಾನೆ. ಜೊತೆಯ ಜೀವಗಳಿಗೆ ಸೇವೆ ಸಲ್ಲಿಸುತ್ತಾನೆ. ಮನುಷ್ಯನಿಗೆ ಈ ಜ್ಞಾನ ಅವನ ಒಳಗಿರುವ ಗುರುವಿನಿಂದ ಬರುತ್ತದೆ. ಆ ಗುರುವೇ ದೈವ, ಬೇರೆ ಅಲ್ಲ. ಈ ನಿಲುವು ಋಜುಜೀವನದಿಂದ ಬರುತ್ತದೆ, ಯುಕ್ತಿಯಿಂದ ಅಲ್ಲ. ಇದು ಪಂಥದ ಉಪದೇಶಸಾರ.

	ಚೈತನ್ಯನ ಅನುಯಾಯಿಗಳು ಕೆಲವು ಕಾಲದ ಮೇಲೆ ರಾಧೆ ಕೃಷ್ಣನ ಪ್ರೇಯಸಿಯೇ, ಪತ್ನಿಯೇ ಎಂಬ ಪ್ರಶ್ನೆಯನ್ನು ಹಿಡಿದು ಪರಕೀಯವಾದಿ, ಸ್ವಕೀಯವಾದಿ ಎಂದು ಎರಡು ಪಂಗಡಗಳಾದರು. ಪತ್ನಿಯ ಪ್ರೇಮ ಕರ್ತವ್ಯ; ಪತ್ನಿ ಅಲ್ಲದವಳ ಪ್ರೇಮ ಅದಕ್ಕಿಂತ ಶ್ರೇಷ್ಠ. ಹೀಗೆ ವಾದಿಸಿದ ಪರಕೀಯವಾದಿಗಳು ಮೇಲುಗೈಯಾದರು. ಚೈತನ್ಯ ಪಂಥದ ಈ ವಾದ ತಂತ್ರಗಳ ಸಹಜೀಯವಾದದ ರೀತಿಯದಾಗಿದೆ. ಈ ವಾದದಿಂದಲೇ ಮೂಡಿಯೂ ಇರಬಹುದು. ಹೇಗೂ ಹಣ್ಣುಗಂಡಿನ ಪ್ರೇಮದ ಭಾಷೆ ಸುಲಭ ಗ್ರಹಣಕ್ಕಾಗಿ ಬಂದಿದೆಯೇ ಹೊರತು ವಸ್ತುಸ್ಥಿತಿಯು ವರ್ಣನಕ್ಕಾಗಿ ಅಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟರೆ ಈ ವಾದಗಳ ಗೊಂದಲ ಅನಾವಶ್ಯಕ ಎನ್ನುವುದನ್ನು ನೆನಪಿನಲ್ಲಿಟ್ಟರೆ ಈ ವಾದಗಳ ಗೊಂದಲ ಅನಾವಶ್ಯಕ ಎನ್ನುವುದು ಸ್ಪಷ್ಟವಾಗುತ್ತದೆ. ಭಗವದನು ಭವಕ್ಕೆ ಕೀರ್ತನ ಸರಿಯಾದ ಮಾರ್ಗವೇ ಧ್ಯಾನ ಸರಿಯಾದ ಮಾರ್ಗವೇ ಎಂಬ ಪ್ರಶ್ನೆಯ ಕಾರಣದಿಂದಲೂ ಅನುಯಾಯಿಗಳಲ್ಲಿ ಕೆಲವು ವೇಳೆ ಭೇದ ಮೂಡಿತು. ಇದೂ ಅನಗತ್ಯವಾದ ಚರ್ಚೆ. ಭಕ್ತನ ಗುರಿ ಹೃದಯದ ರಾಸ ಸ್ಥಿತಿ, ರಸಾನುಭೂತಿ, ಇದನ್ನು ಒಬ್ಬ ಕೀರ್ತನದಿಂದ ಪಡೆಯುವಂತೆ ಬೇರೊಬ್ಬ ಧ್ಯಾನದಿಂದ ಪಡೆಯುತ್ತಾನೆ.

	ಚೈತನ್ಯಪಂಥ ವೈಷ್ಣವನಿಗೆ ಉನ್ನತ ಪ್ರೇಮವನ್ನು ವಿಧಿಸಿದೆ. ಅವನು ದಯಾಳು, ನಿರ್ಮತ್ಸರ, ನಿರಹಂಕಾರಿ, ಪೂರ್ಣ ಸತ್ಯವಂತ, ಅಕಳಂಕ, ಕ್ಷಮಾವಂತ, ಸೌಮ್ಯ ಶುದ್ಧ ಆಗಿರಬೇಕು. ಆಕಿಂಚನನಾಗಿ ಸರ್ವಭೂತ ಹಿತಕಾರಿಯಾಗಿ ಶಾಂತನಾಗಿ ಇರಬೇಕು; ನಿಷ್ಕಾಮ, ಅಹಿಂಸಕ, ಸ್ಥಿರ ಆಗಿ ಕೃಷ್ಣಾರ್ಪಿತ ಸರ್ವಸ್ವನಾಗಿರಬೇಕು; ದಮದಿಂದ ಕೂಡಿ, ಹೆರವರನ್ನು ಗೌರವಿಸುವನಾಗಿ, ಗಂಭೀರ ವಾತ್ಸಲ್ಯಪೂರ್ಣ, ಸ್ನೇಹಪರ, ಕಾವ್ಯಪರ, ಕುಶಲ, ಮೌನಿ ಆಗಿರಬೇಕು.

	ಇಂದು ಚೈತನ್ಯ ಸಂಪ್ರದಾಯ ಬಂಗಾಳ, ಬಿಹಾರ, ಒರಿಸ್ಸ ಮುಂತಾದ ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಚಾರದಲ್ಲಿದೆ. 											(ಎಂ.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ